ಕಂಚಿಯಲ್ಲಾಳಿದ ಒಬ್ಬ ದೊರೆ. ಬನವಾಸಿಯಲ್ಲಿ ಆಳಿದ ಕದಂಬರ ಅರಸನಾದ ರವಿವರ್ಮ ಸೋಲಿಸಿದ ಅರಸರಲ್ಲಿ ಪ್ರಮುಖನಾದವನು. ಕಾಂಚೀಶ್ವರನೆನಿಸಿದ ಚಂಡದಂಡನೆಂದು ತಾಮ್ರಶಾಸನದಲ್ಲಿ ಹೇಳಿದೆ. ಈತನನ್ನು ಕಾಂಚೀಪತಿಯೆಂದು ವರ್ಣಿಸಿರುವುದರಿಂದ, ಆಗ (5 ನೆಯ ಶತಮಾನದ ಅಂತ್ಯಭಾಗ) ಕಂಚಿಯಲ್ಲಿ ಪಲ್ಲವರು ಆಳುತ್ತಿದ್ದರೆಂಬುದು ತಿಳಿದಿದೆಯಾದ್ದರಿಂದ, ಈ ಚಂಡದಂಡೇಶ ಪಲ್ಲವವಂಶಕ್ಕೆ ಸೇರಿದವನೆಂದು ಊಹಿಸಲಾಗಿದೆ. ಕದಂಬ 1ನೆಯ ಕೃಷ್ಣವರ್ಮನ ಮಗನಾದ ವಿಷ್ಣುವರ್ಮನಿಗೂ ರವಿವರ್ಮನಿಗೂ ನಡುವೆ ನಡೆದ ಕದನದಲ್ಲಿ ಚಂಡದಂಡ ವಿಷ್ಣುವರ್ಮನಿಗೆ ಬೆಂಬಲವಾಗಿ ನಿಂತು ಕಾದಿದನೆಂದೂ, ಆದರೆ ವಿಷ್ಣುವರ್ಮನನ್ನು ಕೊಂದ ಬಳಿಕ ರವಿವರ್ಮ ಚಂಡದಂಡೇಶನ ವಿರುದ್ಧ ಏರಿಹೋಗಿ ಅವನನ್ನು ಸೋಲಿಸಿದನೆಂದೂ ಹೇಳಲಾಗಿದೆ. ಆದರೆ ಇದುವರೆಗೆ ತಿಳಿದಂತೆ ಪಲ್ಲವರ ವಂಶಾವಳಿಯಲ್ಲಿ ಚಂಡದಂಡ ಎಂಬ ಹೆಸರೇ ಕಾಣಿಸುವುದಿಲ್ಲ. ರವಿವರ್ಮನ ತಂದೆಯಾದ ಮೃಗೇಶವರ್ಮನೂ ಪಲ್ಲವ ಅರಸನೊಬ್ಬನೊಡನೆ ಕಾದಿದನೆಂದು ಹೇಳಿದೆ. ಆತ ಇದೇ ಚಂಡದಂಡೇಶನೇ ಆಗಿರಬಹುದೆಂದು ಊಹಿಸಲಾಗಿದೆ. ಆದರೆ ಇದುವರೆಗೂ ಚಂಡದಂಡೇಶನನ್ನು ಕುರಿತು ಖಚಿತವಾದ ಯಾವ ವಿವರಗಳೂ ಲಭ್ಯವಾಗಿಲ್ಲ. (ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ